Pages

Subscribe:

Sunday, January 18, 2015

ಮೂಡಿ ಬಾ ಮಿನುಗುತಾರೆ...

ಆಗಸದಿ ಕಂಡ ಮಿನುಗುವ ಚುಕ್ಕಿಗೆ
ಬಯಸಿ ಮನದಲೇ ಬಚ್ಚಿಟ್ಟು ಪ್ರೇಮಿಸಿದೆ
ನಕ್ಷತ್ರ ನೀ ಎನ್ನ ಪಾಲಿನ ದೇವತೆ ಎಂದು
ಬಾಯ್ತುಂಬ ದೂರದಿಂದಲೇ ಸಿಹಿನುಡಿದೆ
ಎಂದೂ ಇರದ ಆನಂದರ ಭಾವನೆಗೆ
ಅಧಿಪತಿ ನಾನೆಂದು ಸಂಭ್ರಮವ ನಾ ಉಂಡೆ
ಜಗಕೆಲ್ಲ ಮಿನುಗುತಾರೆ ಕಂಡರೂ, ಅದು
ಎನ್ನ ಮಾತ್ರ ನೋಡಿ ಮುಗುಳು ನಗುತಿತ್ತು

ಸಂತಸದ ಕ್ಷಣಗಳು ಸಾಗಿರಲು ಇರುಳು ಕಳೆದಿತ್ತು
ಮೂಡಣದಿ ಸೂರ್ಯನ ಕಿರಣ ಸಾಗಿ ಕತ್ತಲ ವಧಿಸಿತ್ತು

ನನ್ನ ಮನದಿ ಆರಿದ್ದ ಸಂತಸ ಚಿಗುರಿಸಿದ್ದ
ಮಿನುಗುತಾರೆ ಬಿಳಿ ಆಗಸದಿ ಕಣ್ಮರೆಯಾಗಿತ್ತು
ಆದರೆ ಕನಸ ಗೋಪುರದಿ ತಾರೆ ಮತ್ತೆ
ನಾಳೆಯ ಪ್ರಜ್ಞೆ ಮೂಡಿಸಿ ಕಾಯಿಸಿತ್ತು

ಮತ್ತೆ ತಣ್ಣನೆಯ ಇರುಳು ಬರುತ್ತೆ ಅನ್ನೋ ಭರವಸೆ
ಅಧಮ್ಯ ನಂಬಿಕೆಯ ಜೊತೆ ಹೃದಯವಿದು ಕಾದಿತ್ತು
ಆದರೆ ಕಾಯುವ ಪ್ರತಿಕ್ಷಣ ಒಂಟಿ ಎಂಬ ನಿಜಭಾವ
ಮನವ ಕಲಕಿ ತುಸು ಹಿಂಡಿ ಹಿಂಡಿ ಹಿಪ್ಪೆ ಮಾಡಿತ್ತು

ಪ್ರೀತಿ ತಪ್ಪಲ್ಲ ಅಂತ ಜಗವೇ ಸಾರಿ ಹೇಳುತ್ತೆ..
ಆದರೂ..
ಮಾಡದ ತಪ್ಪಿಗೆ ಮನ ನೋಯುತಿದೆ.. ಕಣ್ಣು ತೋಯುತಿದೆ..
ಹೃದಯವಿದು ಮಡಿಯುತಿದೆ..
ಮತ್ತೆ ಇರುಳಿಗೆ ಕಾಯುವ ಎನಗೆ ಮನದಲಿ ಒಂದೇ ಬಯಕೆ
ಎನ್ನ ಮನದ ಆಗಸದಿ ಮೂಡಿ ಬಾ ಮಿನುಗುತಾರೆ....

- ವರುಣ್​ ಕಂಜರ್ಪಣೆ

Tuesday, January 6, 2015

ಎನಿತು ಪ್ರೀತಿಯ ನೀಡಲಿ ನಿನಗೆ...

ಎನಿತು ಪ್ರೀತಿಯ ನೀಡಲಿ ನಿನಗೆ...

ಎನಿತು ಪ್ರೀತಿಯ ನೀಡಲಿ ನಿನಗೆ
ಓ ನನ್ನ ಪ್ರೇಯಸಿ..

ಕಾದಿರುವ ಹೃದಯದಿ ಮೂಡಿರುವ
ಪುಟ್ಟ ಕವನದ ಸಾಲ ಹಾಡಿ ಹೇಳಲೇ..
ಕಣ್ತುಂಬ ನಿನ್ನ ಕಾಣೋ ಬಯಕೆ
ತುಂಬಿರುವ ಕಂಗಳಲೇ ಹೇಳಲೇ.

ಇರುಳ ಆಗಸದಿ ಮೂಡಿ ಹೊಳೆವ
ಅದೆಷ್ಟೋ ಚುಕ್ಕಿಗಳ ಚಿತ್ತಾರ ಬಿಡಿಸಲೇ..
ಬೀಸುವ ಗಾಳಿಗೆ ತಲೆದೂಗಿ ನರ್ತಿಸಿ
ಹಾಡುವ ಮರಗಳ ಗಾನ ತಂದಿಡಲೇ..

ಮೂಡಣದ ಮೋಡಗಳ ರಾಶಿಗೆ
ರಂಗಿತ್ತು ಕುಂಚದಿ ಹೃದಯವ ಬಿಡಿಸಲೇ..
ಎನಿತು ಪ್ರೀತಿಯ ನೀಡಲಿ ನಿನಗೆ
ಓ ನನ್ನ ಪ್ರೇಯಸಿ..

- ವರುಣ್​ ಕಂಜರ್ಪಣೆ